ಕ್ಯಾರೆಲ್, ಅಲೆಕ್ಸಿಸ್

1873-1944 .  ಫ್ರಾನ್ಸ್‍ದೇಶದ ಶಸ್ತ್ರಕ್ರಿಯಾ ಹಾಗೂ ಜೀವವಿಜ್ಞಾನ ತಜ್ಞ.  ಲೈಯಾನಿನಲ್ಲಿ 1873ರ ಜೂನ್ 28ರಂದು ಜನನ;  ವೈದ್ಯ ಹಾಗೂ ದೇಹವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ವಿಜೇತ (1912).  ಮ್ಯಾನ್ ದಿ ಅನ್‍ನೋನ್ (ಅವ್ಯಕ್ತ ಮಾನವ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದವಾಗಿದೆ) ಎಂಬ ಶ್ರೇಷ್ಠ ಗ್ರಂಥದ ಕರ್ತೃ (ಪ್ರಥಮ ಪ್ರಕಟಣೆ 1935).

ಲೈ ಯಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಜನೆಯನ್ನು ಕ್ಯಾರೆಲ್ 1900ರಲ್ಲಿ ಮುಗಿಸಿ ಮುಂದಿನ ಎರಡು ವರ್ಷಗಳ ಕಾಲ ಅಲ್ಲೇ ಪ್ರಾಸೆಕ್ಟರ್ (ಅಂದರೆ ವೈದ್ಯಕೀಯ ಪರೀಕ್ಷೆಗಾಗಿ ಹೆಣಗಳನ್ನು ಕೊಯ್ಯುವನ) ಆಗಿ ಕೆಲಸಮಾಡಿದ.  ಅಲ್ಲಿ ತನ್ನ ಪ್ರಯೋಗಗಳ ಮೂಲಕ ಸಂಶೋಧನೆಯನ್ನು ಆರಂಭಿಸಿದ.  ಮುಂದೆ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಅದನ್ನು ಮುಂದುವರಿಸಿದ (1905).  ನ್ಯೂಯಾರ್ಕಿನ ರಾಕ್‍ಫೆಲರ್ ವೈದ್ಯಶಾಸ್ತ್ರ ಸಂಶೋಧನಾಲಯದಲ್ಲಿ ಅವನಿಗೆ ಕೆಲಸ ಸಿಕ್ಕಿದ್ದು 1906ರಲ್ಲಿ.  ಮುಂದೆ ಅದೇ ಸಂಸ್ಥೆಯ ಸದಸ್ಯನಾದ (1912). ಅಲ್ಲಿ ಕ್ಯಾರೆಲ್ ರಕ್ತನಾಳಗಳ ಬಗ್ಗೆ ಸಂಶೋಧನೆ ನಡೆಸಿ ರಕ್ತವನ್ನು ಒಬ್ಬರಿಂದೊಬ್ಬರಿಗೆ ಪೂರೈಸುವುದರ ಬಗ್ಗೆ ಒಂದು ಹೊಸವಿಧಾನವನ್ನೇ ಕಂಡುಹಿಡಿದ.  ರಕ್ತನಾಳಗಳನ್ನೂ ಅಂಗಗಳನ್ನೂ ನಾಟಿ ಹಾಕುವುದರ (ಟ್ರಾನ್ಸ್‍ಪ್ಲಾಂಟೇಶನ್) ಬಗ್ಗೆ ಅಧ್ಯಯನ ನಡೆಸಲು ಈ ಸಂಶೋಧನೆಗಳಿಂದ ಅನುಕೂಲವಾಯಿತು.  ಈ ಸಿದ್ಧಿ ಕ್ಯಾರೆಲ್‍ನಿಗೆ ನೊಬೆಲ್ ಪಾರಿತೋಷಿಕವನ್ನು ದೊರಕಿಸಿಕೊಟ್ಟಿತು.

ಊತಕಗಳನ್ನು (ಟಿಶ್ಯೂಸ್) ದೇಹದ ಹೊರಗೆ ಕಾಪಾಡಿ, ಅವನ್ನು ಶಸ್ತ್ರ ಕ್ರಿಯೆಯಲ್ಲಿ ಬಳಸುವುದರ ಬಗ್ಗೆ ಕ್ಯಾರೆಲ್ ಅಧ್ಯಯನ ನಡೆಸಿದ.  ಜೀವಿಗಳಿಂದ  ಬೇರ್ಪಡಿಸಲ್ಪಟ್ಟ ಊತಕಗಳು ದೇಹದ ಹೊರಗೆ ಬದುಕಿ ಉಳಿದಿರುವಾಗ ಹೇಗಿರುತ್ತವೆ ಎಂಬುದನ್ನು ಕಂಡುಕೊಳ್ಳಲು ಇದರಿಂದ ಹೆಚ್ಚಿನ ಸಹಾಯವಾಯಿತು.  ಮೊದಲನೆಯ ಮಹಾಯುದ್ಧದ ಬಳಿಕ ಕ್ಯಾರೆಲ್ ಫ್ರಾನ್ಸಿಗೆ ಮರಳಿದ.  ಹನ್ರಿ ಡ್ರೈಸ್ಟೇಲ್‍ಡಾಕಿನ್ ಮತ್ತು ಕ್ಯಾರೆಲ್ ದೀರ್ಘಕಾಲ ಅಧ್ಯಯನ ನಡೆಸಿ ಡಾಕಿನ್ನನ ದ್ರಾವಣ ಎಂಬ ಹೆಸರಿನ ರೋಗಾಣುನಾಶಕ ದ್ರವವನ್ನು ಪರಿಶೋಧಿಸಿದರು.  ಗಾಯಗಳಿಗೆ ಚಿಕಿತ್ಸೆ ನಡೆಸಲು ಡಾಕಿನ್ನನ ಮಾರ್ಗವನ್ನು ಕಲ್ಪಿಸುವುದರಲ್ಲಿ ಕ್ಯಾರೆಲ್ಲನ ಸಹಾಯ ಗಮನಾರ್ಹವಾಗಿತ್ತು.  ಇದರಿಂದ ಕೈಕಾಲುಗಳನ್ನು ಕತ್ತರಿಸಿ ತೆಗೆದುಹಾಕಬೇಕಾದ ಅವೆಷ್ಟೋ  ಸಂದರ್ಭಗಳು ತಪ್ಪಿದುವು.  ಅದೇ ಕಾಲದಲ್ಲಿ ಕ್ಯಾರೆಲ್, ಲಿಕೊನೈಟ್ ಡ್ಯೂನಾಯ್ ಮತ್ತು ಇತರ ಸಹೋದ್ಯೋಗಿಗಳೊಡನೆ, ಗಾಯ ಒಣಗಿ ವಾಸಿಯಾಗುವುದರ ಬಗ್ಗೆ ಅಧ್ಯಯನ ನಡೆಸಿದ.  ಊತಕಗಳನ್ನೂ ಅಂಗಗಳನ್ನೂ ದೇಹದ ಹೊರಗೆ ಬೆಳೆಸುವುದರ ಬಗ್ಗೆ ಹೊಸ ವಿಧಾನವನ್ನೇ ಕ್ಯಾರೆಲ್ ಕಂಡುಹಿಡಿದ (1919).  1941ರಲ್ಲಿ ಫ್ರಾನ್ಸಿನಲ್ಲಿ ಫ್ರಾನ್‍ಕೈಸ್ ಸಂಸ್ಥೆಯನ್ನು ಸ್ಥಾಪಿಸುವುದರಲ್ಲಿ ಸಹಾಯಕನಾಗಿ ತನ್ನ ನಾಯಕತ್ವದಲ್ಲಿಯೇ ಮಾನವನ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಮುಂದುವರಿಸಿ ಆ ಬಗ್ಗೆ ಇನ್ನೂ ಹೆಚ್ಚಿನ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿಕೊಟ್ಟ.

ಎರಡನೆಯ ಮಹಾಯುದ್ಧದಲ್ಲಿ ಕ್ಯಾರೆಲ್ಲನ ಒಲವು ಅಕ್ಷರಾಷ್ಟ್ರಗಳ ಕಡೆಗಿತ್ತು (1940).   ಫ್ರಾನ್ಸಿನ ಆಕ್ರಮಿತ ಪ್ರದೇಶದಲ್ಲಿದ್ದ ವಿಚಿ ಸರ್ಕಾರದ ಪರ ಕ್ಯಾರೆಲ್ ಕೆಲಸ ಮಾಡಿದ್ದ.  ಜರ್ಮನ್ ಹಿಡಿತದಿಂದ ಫ್ರಾನ್ಸನ್ನು ವಿಮೋಚನೆಗೊಳಿಸಿದಾಗ ಕ್ಯಾರೆಲನÀನ್ನು ಅವನ ಹುದ್ದೆಗಳಿಂದ ವಜಾ ಮಾಡಿದರು.  ಮುಂದೆ ಕೆಲವೇ ತಿಂಗಳುಗಳಲ್ಲಿ, ಪ್ಯಾರಿಸ್‍ನಲ್ಲಿ 1944ರ ನವೆಂಬರ್ 5ರಂದು ಅವನು ಗತಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ